ಪಿಟ್‍ರಿವರ್ಸ್ ಆಗಸ್ಟಸ್ ಹೆನ್ರಿಲೇನ್ - ಫಾಕ್ಸ್
1827-1900. ಬ್ರಿಟಿಷ್ ಪುರಾತತ್ವಜ್ಞ. ಉತ್ಖನನಕಾರರ ಸಾಮ್ರಾಟನೆಂದು ಪ್ರಸಿದ್ಧ. ಬ್ರಿಟನ್ನಿನ ಯಾರ್ಕ್‍ಷೈರಿನ ಹೋಪ್‍ಹಾಲ್‍ನಲ್ಲಿ 1827 ರಲ್ಲಿ ಜನಿಸಿದ. ಆಗಸ್ಟಸ್ ಹೆನ್ರಿ ಲೇನ್-ಫಾಕ್ಸ್ ಎಂಬುದು ಈಗ ಈತನ ಹೆಸರು. ತನ್ನ 19 ನೆಯ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿದ ಈತ 35 ವರ್ಷಗಳ ಕಾಲ ಅಲ್ಲಿ ಮಹತ್ವಪೂರ್ಣ ಸೇವೆ ಸಲ್ಲಿಸಿ ಲೆಫ್ಟೆನಂಟ್-ಜನರಲ್ ಸ್ಥಾನಕ್ಕೆ ಏರಿದ. 1880 ರಲ್ಲಿ ಈತ ರಿವರ್ಸ್ ಭೂ ಆಸ್ತಿಗೆ ಒಡೆಯನಾದಾಗ ಇವನಿಗೆ ಪಿಟ್ ರಿವರ್ಸ್ ಎಂಬ ಹೆಸರೂ ಶ್ರೀಮಂತ ಪದವಿಯೂ ಬಂದುವು. ಪ್ರಾಕ್ತನಾ ಉತ್ಖನನಗಳಲ್ಲಿ ಈತ ರೂಢಿಗೆ ತಂದ ನಿಖರತೆ, ಉತ್ಖನನ ಪದ್ಧತಿಯಲ್ಲಿ ದಾಖಲಾತಿ ಮತ್ತು ವರದಿಗಳ ಪ್ರಕಟಣ ಕಾರ್ಯದಲ್ಲಿ ನಿರ್ಮಿಸಿದ ಉನ್ನತ ಮಟ್ಟಗಳು-ಇವು ಇತ್ತೀಚಿನವರೆಗೂ ಆದರ್ಶಪ್ರಾಯವಾಗಿ ಉಳಿದಿದ್ದುವು.

	ಪಿಟ್ ರಿವರ್ಸ್‍ನ ಶಾಸ್ತ್ರೀಯ ಕೊಡುಗೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. 1845 ರಿಂದ 1880 ರವರೆಗೆ ಸೈನ್ಯದಲ್ಲಿ ಸಿಡಿಮದ್ದಿನ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಪ್ರಾಚೀನ ಕಾಲದಿಂದಲೂ ಬಂದೂಕುಗಳ ತಯಾರಿಕೆಯಲ್ಲಿ ಉಂಟಾದ ಸುಧಾರಣೆಗಳನ್ನು ಅಭ್ಯಸಿಸಲಾರಂಭಿಸಿದ. ಈ ಅಧ್ಯಯನದಲ್ಲಿ ಬಂದೂಕುಗಳ ಕಲಾವಂತಿಕೆ-ನಿರ್ಮಾಣ ಕೌಶಲಗಳಿಗೆ ಪ್ರಾಧಾನ್ಯ ನೀಡದೆ ಅವುಗಳ ರೂಪರೇಷೆ ಮತ್ತು ಉಪಯುಕ್ತತೆಗಳನ್ನು ತಳಹದಿ ಮಾಡಿಕೊಂಡು ವರ್ಗೀಕರಣ ಮಾಡಿದ. ಕ್ರಮೇಣ ಈ ವರ್ಗೀಕರಣ ಸೂತ್ರವನ್ನು ಪ್ರಾಕ್ತನಶಾಸ್ತ್ರ ಮತ್ತು ಮಾನವ ಶಾಸ್ತ್ರಗಳಲ್ಲೂ ಬಳಸಬಹುದೆಂಬುದನ್ನು ತೋರಿಸಿದ. ಯಾವುದೇ ಸಂಸ್ಕøತಿಯ ಸಂಪೂರ್ಣ ಪರಿಚಯ ಪಡೆಯಲು, ಅದರ ವಿಕಾಸವನ್ನು ಅರಿಯಲು ಆ ಸಂಸ್ಕøತಿಯ ವಿಶಿಷ್ಟ ವಸ್ತುಗಳಿಗಿಂತ ಸಾಮಾನ್ಯ ವಸ್ತುಗಳ ಅಧ್ಯಯನ ಸಾಧಕವೆಂದು ವಾದಿಸಿದ. ಇವನ ಸಮಕಾಲೀನನಾಗಿದ್ದ ಫ್ಲಿಂಡರ್ಸ್ ಪೆಟ್ರಿಯೂ ಇಂಥ ಅಭಿಪ್ರಾಯವುಳ್ಳವನಾಗಿದ್ದು ಇವರಿಬ್ಬರೂ ಆಗಿನ ಇತರ ಸಂಶೋಧಕರಿಗಿಂತ ಭಿನ್ನವಾದ ಹಾದಿಯನ್ನು ತುಳಿದಿದ್ದರು. ಚಾಲ್ರ್ಸ್ ಡಾರ್ವಿನ್ನನ ವಿಕಾಸವಾದದ ಪ್ರಭಾವದ ಛಾಯೆಯನ್ನು ಈ ಪದ್ಧತಿಯಲ್ಲಿ ಕಾಣಬಹುದಾದರೂ, ಸಂಸ್ಕøತಿಗಳಲ್ಲಿ ಉಂಟಾಗಿರಬಹುದಾದ ಅವನತಿಯ ಚಿಹ್ನೆಗಳನ್ನು ಈತ ನಿರ್ಲಕ್ಷಿಸಲಿಲ್ಲ. ಈತ ವಿಫುಲವಾಗಿ ಸಂಗ್ರಹಿಸಿದ್ದ ಬಂದೂಕುಗಳನ್ನು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯದಲ್ಲಿ ಇವನ ಹೆಸರುಳ್ಳ ಪ್ರತ್ಯೇಕ ವಿಭಾಗದಲ್ಲಿ ಪ್ರದರ್ಶಿಸಲಾಯಿತು. ಈತ ಪ್ರಿಮಿಟಿವ್ ವಾರ್‍ಫೇರ್ ಎಂಬ ಗ್ರಂಥವನ್ನು ಬರೆದು ಪ್ರಕಟಿಸಿದ. (1867-69). 
 
1880 ರಲ್ಲಿ ಪಿತ್ರಾರ್ಜಿತ ಭೂ ಆಸ್ತಿಯೊಂದಿಗೆ ಇವನಿಗೆ ಶ್ರೀಮಂತ ಪದವಿ ಬಂತು. ಆಗ ಇವನು ಸೈನ್ಯ ಸೇವೆಯನ್ನು ತ್ಯಜಿಸಿ ವಿಲ್ಟ್‍ಷೈರಿನ ರಷ್‍ಮೋರ್‍ನಲ್ಲಿ ಕ್ರ್ಯಾನ್‍ಬೋರ್ನ್ ಚೇಸ್‍ನಲ್ಲಿ ತನಗೆ ದೊರಕಿದ ಜಮೀನಿನಲ್ಲಿ ಪ್ರಾಕ್ತನ ಅವಶೇಷಗಳ ಸಂಶೋಧನೆಗೆ ಗಮನಹರಿಸಿದ. ಮುಂದೆ ಇಲ್ಲಿ ಅನೇಕ ಉತ್ಖನನಗಳನ್ನು ಶಾಸ್ತ್ರೀಯವಾಗಿ ಮತ್ತು ನಿರ್ದುಷ್ಟ ಪದ್ಧತಿಗಳಿಗೆ ಅನುಸಾರವಾಗಿ ನಡೆಸಿದ. ತನ್ನ ಸಂಶೋಧನೆಗಳ ಫಲಿತಾಂಶವನ್ನು ಎಕ್ಸ್‍ಕವೇಷನ್ಸ್ ಇನ್ ಕ್ರ್ಯಾನ್‍ಬೋರ್ನ್‍ಚೇಸ್ (1887) ಎಂಬ ವಿಸ್ತøತ ವರದಿಯಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ಪ್ರಕಟಿಸಿದ. ಇವನು ಉತ್ಖನನಗಳನ್ನು ಮುಂದುವರಿಸಿದ. ಈ ಕುರಿತ ವರದಿಗಳು ಇನ್ನೂ ಮೂರು ಸಂಪುಟಗಳಲ್ಲಿ ಹೊರಬಿದ್ದುವು. ಬ್ರಿಟನ್ನಿನಲ್ಲಿ ರೋಮನ್ನರ ಅವಶೇಷಗಳಿದ್ದ ವುಡ್ ಕಟ್ಸ್, ರಾದರ್ಲೆ ಸೌಲ್ ಲಾಜ್, ಹಾಂಡ್ಲೆಹಿಲ್ ಮತ್ತು ಮಾರ್ಟಿನ್ ಡೌನ್ ಎಂಬ ಹಳ್ಳಿಗಳ ಬಳಿಯಲ್ಲಿ ಈತ ಅಧ್ಯಯನ ನಡೆಸಿದ. ಈ ಪ್ರಾಕ್ತನ ಸಂಶೋಧನೆಗಳೊಂದಿಗೆ ಐತಿಹಾಸಿಕ ಹಾಗೂ ಮಾನವ ಶಾಸ್ತ್ರೀಯ ಸಂಶೋಧನೆಗಳನ್ನೂ ಮಾಡಿ, ಲಾಕ್ಸ್ ಆಂಡ್ ಕೀಸ್ (1883). ಕಿಂಗ್ ಜಾನ್ಸ್ ಹೌಸ್, ಟೋಲ್ಲಾರ್ಡ್ ರಾಯಲ್ (1890) ಮತ್ತು ವಕ್ರ್ಸ್ ಆಫ್ ಆಟ್ರ್ಸ್ ಫ್ರಮ್ ಡೆನಿನ್ (1900) ಎಂಬ ಕೃತಿಗಳನ್ನು ಪ್ರಕಟಿಸಿದ.

ಪಿಟ್ ರಿವರ್ಸ್ ಉತ್ಖನನಶಾಸ್ತ್ರದ ರೀತಿನೀತಿಗಳ ಮೂಲ ಶೋಧಕನಲ್ಲದಿದ್ದರೂ, ತನಗೆ ಹಿಂದಿನವರಾದ ವಿಲಿಯಮ್ ಕನಿಂಗ್‍ಟನ್, ರಿಚರ್ಡ್ ಕೋಲ್ಟ್‍ಹೋರ್ ಮೊದಲಾದ ಪುರಾತತ್ವಜ್ಞರ ರೀತಿನೀತಿಗಳನ್ನು ಅಳವಡಿಸಿಕೊಂಡು ತನ್ನ ಪ್ರತಿಭೆಯಿಂದ ಅವಕ್ಕೆ ಒಂದು ಶಾಸ್ತ್ರೀಯ ನಿಖರತೆಯನ್ನು ನೀಡಿದ. ಪದರಶಾಸ್ತ್ರವನ್ನು ಆಧಾರವಾಗಿಟ್ಟುಕೊಂಡು ಮಾನವ ವಸತಿಗಳ ಉತ್ಖನನಗಳ ಸಂಶೋಧನೆ ಮಾಡಿದ ಮೊದಲಿಗರಲ್ಲಿ ಈತ ಸೇರಿದ್ದಾನೆ. ಮೂರು ಆಯಾಮಗಳ ಬದ್ಧ ಅಳತೆಯ ಪದ್ಧತಿಯನ್ನು ಉತ್ಖನನಗಳಿಗೆ ಅಳವಡಿಸಿಕೊಂಡವರಲ್ಲಿ ಈತ ಮೊದಲಿಗ. ಉತ್ಖನನದಲ್ಲಿ ದೊರಕಿದ ಎಲ್ಲ ವಸ್ತುಗಳನ್ನು, ಮಹತ್ವದವಲ್ಲವೆಂದು ತೋರುವ ವಸ್ತುಗಳನ್ನೂ ಕೂಡ ದಾಖಲೆ ಮಾಡಬೇಕೆಂದು ಇವನು ವಾದಿಸಿದ. ಪ್ರಾಕ್ತನಶಾಸ್ತ್ರದಲ್ಲಿ ಈ ಪದ್ಧತಿಗಳ ಮಹತ್ವ ಈಗಿನ ಸಂಶೋಧಕರಿಗೆ ಚೆನ್ನಾಗಿ ಮನವರಿಕೆಯಾಗಿದೆ.									   	     (ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ